ಪ್ರಶಂಸೆ ಮತ್ತು ಕೃತಜ್ಞತೆಗಾಗಿ (#9472)

ಓ ನನ್ನ ದೇವರೇ, ಯಾರು ಎಲ್ಲ ವೈಭವ ಮತ್ತು ಭವ್ಯತೆಯ, ಮಹತ್ವ ಮತ್ತು ಗೌರವದ, ಸೌರ್ವಭೌಮತ್ವ ಮತ್ತು ಪ್ರಭುತ್ವದ, ಔನ್ನತ್ಯ ಮತ್ತು ದಯೆಯ, ಗಂಭೀರತೆ ಮತ್ತು ಶಕ್ತಿಯ ಮೂಲನಾಗಿರುವನೋ, ಅವನ ಸರ್ವ ಪ್ರಶಂಸೆಯಾಗಲಿ.  ನೀನು ಯಾರನ್ನು ಇಚ್ಛಿಸುವೆಯೋ ಅವರನ್ನು ಅತ್ಯಂತ ಮಹಾಸಾಗರದ ಬಳಿಗೆ ಕರೆದೊಯ್ಯುವಂತೆ ಮಾಡುವೆ, ಹಾಗೂ ಯಾರನ್ನು ನೀನು ಇಚ್ಛಿಸುವೆಯೋ ಅವರ ಮೇಲೆ ನಿನ್ನ ಅತಿ ಪುರಾತನ ನಾಮವನ್ನು ಗುರುತಿಸುವ ಗೌರವವನ್ನು ನೀನು ಅನುಗ್ರಹಿಸುವೆ.  ಸ್ವರ್ಗದಲ್ಲಿರುವವರಾಗಲೀ ಮತ್ತು ಭೂಮಿಯಲ್ಲಿರುವವರಾಗಲೀ, ಯಾರು ನಿನ್ನ ಸಾರ್ವಭೌಮ ಇಚ್ಛೆಯನ್ನು ಪೂರೈಸುವುದನ್ನು ತಡೆಹಿಡಿಯಲಾರರು.  ಚಿರಂತನ ಸಮಯದಿಂದಲೂ ಸಮಸ್ತ ಸೃಷ್ಟಿಯನ್ನು ನೀನು ಆಳುತ್ತಿರುವೆ ಹಾಗೂ ಎಂದೆಂದಿಗೂ ಎಲ್ಲಾ ಸೃಷ್ಟಿಯ ಮೇಲೂ ನಿನ್ನ ಪ್ರಭುತ್ವವನ್ನು ಚಲಾಯಿಸುವೆ.  ಸರ್ವಶಕ್ತನೂ, ಮಹೋನ್ನತನೂ, ಸರ್ವಪ್ರಬಲನೂ, ಸರ್ವವಿವೇಕಿಯೂ ಆದ ನೀನಲ್ಲದೆ ಅನ್ಯ ದೇವರಿಲ್ಲ.
ಓ ಪ್ರಭುವೇ, ನಿನ್ನನ್ನು ನೋಡುವಂತೆ ನನ್ನ ಸೇವಕರ  ಮುಖಗಳನ್ನು ಬೆಳಗಿಸು ನಿನ್ನ ಸ್ವರ್ಗೀಯವಾದ ಕೃಪೆಗಳತ್ತ ಅವರು ತಿರುಗುವಂತೆ ಹಾಗೂ ಸ್ವಯಂ ನಿನ್ನ ಪ್ರಕಟಣೆ ಹಾಗೂ ನಿನ್ನ ಸಾರಸತ್ವದ ದಿನ ಚಿಲುಮೆಯಾಗಿರುವವನನ್ನು ಗುರುತಿಸುವಂತೆ ಅವರ ಹೃದಯಗಳನ್ನು ಸ್ವಚ್ಛಗೊಳಿಸು.  ಸತ್ಯವಾಗಿಯೂ, ಎಲ್ಲಾ ಪ್ರಪಂಚಗಳ ಪ್ರಭು ನೀನಾಗಿರುವೆ.  ಅನಿರ್ಬಂಧಿತನೂ, ಸರ್ವನಿಗ್ರಹಿಯೂ ಆದ ನೀನಲ್ಲದೆ ಬೇರೆ ದೇವರಿಲ್ಲ.

-Bahá'u'lláh
-----------------------

ಪ್ರಶಂಸೆ ಮತ್ತು ಕೃತಜ್ಞತೆಗಾಗಿ (#9473)

ಓ ದಯಾಮಯನಾದ ಪರಮಾತ್ಮನೆ!  ನನ್ನನ್ನು ಎಚ್ಚರಗೊಳಿಸಿ ಜಾಗೃತನನ್ನಾಗಿ ಮಾಡಿದ್ದಕ್ಕೆ ನಿನಗೆ ಆಭಾರಿಯಾಗಿದ್ದೇನೆ.  ನೀನು ಕಾಣುವ ಕಣ್ಣನ್ನು ದಯಪಾಲಿಸಿದ್ದೀಯೆ.  ಕೇಳುವ ಕಿವಿಗಳನ್ನು ನೀಡಿದ್ದೀಯೆ.  ನಿನ್ನ ಸಾಮ್ರಾಜ್ಯಕ್ಕೆ ಒಯ್ದಿದ್ದೀಯೆ.   ಅಲ್ಲದೆ ನನ್ನ ಮಾರ್ಗಕ್ಕೆ ದಾರಿದೀಪವಾಗಿದ್ದೀಯೆ.  ನೀನು ನನಗೆ ಸನ್ಮಾರ್ಗವನ್ನು ತೋರಿರುವೆ ಮುಕ್ತಿಯ ನಾವೆಯನ್ನು ಪ್ರವೇಶಿಸುವಂತೆ ಮಾಡಿರುವೆ.  ಓ ದೇವರೇ, ನನ್ನನ್ನು ನಿಶ್ಚಲ ಮನಸ್ಸಿನವನಂತೆ ಮಾಡು. ಅಚಲನಾಗಿರಲು ಒತ್ತಾಸೆ ನೀಡು, ನಿಷ್ಠಾವಂತನಾಗಿರುವಂತೆಯೂ ಕರುಣಿಸು.  ಉಗ್ರವಾದ ಸತ್ವ ಪರೀಕ್ಷೆಗಳಿಂದ ಕಾಪಾಡು.  ನಿನ್ನ ಒಡಂಬಡಿಕೆ ಹಾಗೂ ಶಾಸನವೆಂಬ ಪ್ರಬಲವಾದ ದುರ್ಗಮವಾದ ಕೋಟೆಯೊಳಗಿಟ್ಟು ನನ್ನನ್ನು ರಕ್ಷಿಸು.  ನೀನೇ ನನ್ನ ಕಣ್ಣು, ಕಿವಿ, ನೀನೇ ಶಕ್ತಿಶಾಲಿ.  ಓ ಕರುಣಾಮಯಿಯಾದ ಭಗವಂತನೇ, ನಿನ್ನ ಪ್ರೇಮದ ಜ್ಯೋತಿಯಿಂದ ಬೆಳಗುವ ಕನ್ನಡಿಯಂಥ ಹೃದಯವನ್ನು ಕೊಡು.  ಆಧ್ಯಾತ್ಮಿಕ ಪ್ರಸಾದದ ಮೂಲಕ ಈ ಜಗತ್ತನೇ ಒಂದು ಗುಲಾಬಿ ತೋಟದಂತೆ ಮಾರ್ಪಡಿಸುವ ಸೂಚನೆಯೊಂದನ್ನು ಕರುಣಿಸುವವನಾಗು.
ನೀನು ಕಾರುಣ್ಯಮೂರ್ತಿ, ದಯಾನಿಧಿ, ನೀನೇ ಅಪಾರ ಸೌಭಾಗ್ಯದ ಸಾಕಾರ ಪರಮಾತ್ಮ.

-`Abdu'l-Bahá
-----------------------

